ಮರುಳಸಿದ್ಧ 1-
ವೀರಶೈವ ಪಂಚಾಚಾರ್ಯರಲ್ಲಿ ಒಬ್ಬರು. ಇವರು ಮಾಳವದೇಶದ ಆವಂತಿ ಎಂದು ಪ್ರಸಿದ್ಧವಾದ ವಟಕ್ಷೇತ್ರ ಸಿದ್ಧೇಶಲಿಂಗದಿಂದ ಅವತರಿಸಿ ಉಜ್ಜಯನಿಯಲ್ಲಿ ಧರ್ಮಪೀಠವನ್ನು ಸ್ಥಾಪಿಸಿದಂತೆ ವೀರಶೈವ ಧರ್ಮ ಗ್ರಂಥಗಳಲ್ಲಿ ಹೇಳಿದೆ. ಇವರಿಗೆ ವಾಮದೇವಮುಖ, ಯಜುರ್ವೇದಾಧ್ಯಯನ, ನಂದಿಗೋತ್ರ, ವೃಷ್ಟಿಸೂತ್ರ, ದಕ್ಷಿಣಕಲಶಾಧೀಶ್ವರರತ್ವ, ಮಾಯಾಪಂಚಾಕ್ಷರೀ ಜಾಪಕತ್ವ, ರಕ್ತಕಂಥಾ, ಪಾಲಾಶದಂಡ ಮುಂತಾದ ಪ್ರವರಗಳಿವೆ. ಇವರು ದ್ವಾಪರಾಚಾರ್ಯದಾರುಕನ ಅವತಾರವೆಂಬ ನಂಬಿಕೆಯೂ ವೀರಶೈವರಲ್ಲಿ ಕಂಡು ಬರುತ್ತದೆ. ಆಗಮಗಳಲ್ಲಿ ಹೇಳಿರುವಂತೆ ದ್ವ್ಯಕ್ಷರ, ದ್ವಿವಕ್ತ್ರ, ದಾರುಕು ಮತ್ತು ಮರುಳಾರಾಧ್ಯ ಎಂದು ಕ್ರಮವಾಗಿ ನಾಲ್ಕು ಯುಗಗಳಲ್ಲಿಯೂ ಪ್ರಸಿದ್ಧರಾದವರು. 11-12ಯ ಶತಮಾನಗಳಲ್ಲಿ ಮಾಳವದ ಉಜ್ಜಯನಿ ಮ್ಲೇಚ್ಛಾಕ್ರಾಂತವಾದ ಮೇಲೆ ಇವರು ಕರ್ನಾಟಕದ ಉಜ್ಜಿನಿಯಲ್ಲಿ (ಬಳ್ಳಾರಿ ಜಿಲ್ಲೆ) ಸ್ಥಿರನಿವಾಸ ಏರ್ಪಡಿಸಿದಂತೆ ತಿಳಿದುಬರುತ್ತದೆ. ಇವರ ಜೀವನದ ಇತರ ವಿವರಗಳು ಮತ್ತು ಇವರು ರಚಿಸಿದ ಗ್ರಂಥಗಳು ಉಪಬ್ಧವಿಲ್ಲ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ